ಓಲ್ಡುವೈ: ಮಾನವನ ಉಗಮ ಮತ್ತು ಅವನ ಇತಿಹಾಸ ಪುರ್ವ ಸಂಸ್ಕೃತಿಗಳನ್ನು ತಿಳಿಯಲು ಬಹಳ ಮುಖ್ಯವಾದ ಸ್ಥಳ. ಪುರ್ವ ಆಫ್ರಿಕದ ಟ್ಯಾಂಝಾನಿಯದ (ಈಗಿನ ಟಾಂಗನೀಕ) ಆಗ್ನೇಯ ಭಾಗದಲ್ಲಿನ ಸೆರೆಂಗಟಿ ಮೈದಾನದ ಒಂದು ಭಾಗ. ಪ್ಲಿಸ್ಟೊಸೀನ್ ಯುಗದ ಪ್ರಾರಂಭದಲ್ಲಿ ಉದಿಸಿದ ಶಿಲಾಪದರಗಳು ಇಲ್ಲಿನ ಓಲ್ಡುವೈ ನದಿಯ ಬಂiÀÄಲಿನಲ್ಲಿ ಹರಡಿವೆ. ಪ್ರವಾಹದ ಕೊರೆತದಿಂದ ಇಲ್ಲಿ ಸು. 300 ಅಡಿಗಳ ಆಳವಿರುವ ಕಮರಿಯೊಂದು ಏರ್ಪಟ್ಟು, ಕಮರಿಯ ಪಕ್ಕಗಳಲ್ಲಿ ವಿವಿಧ ಶಿಲಾಪದರಗಳು ಕಂಡುಬಂದಿವೆ.

ಕಮರಿಯ ತಳದಿಂದ ಮೇಲಕ್ಕೆ ಕಂಡುಬರುವ ಪದರಗಳು ಈ ರೀತಿಯಾಗಿವೆ. ತಳದಲ್ಲಿ ಜ್ವಾಲಾಮುಖಿಯ ಸ್ಪೋಟದಿಂದ ಹುಟ್ಟಿದ ಬಸಾಲ್ಟ್‌ ಶಿಲೆಯ ದಪ್ಪನಾದ ಪದರಗಳಿದ್ದು, ಅದರ ಮೇಲೆ ಕೆಂಪು ಶಿಲೆಯ 100 ಅಡಿ ದಪ್ಪದ ಪದರವೂ ಅನಂತರ ಬೂದುಬಣ್ಣದ ಪದರವೂ ಮೇಲ್ಭಾಗದಲ್ಲಿ ಈಗಿನ ನೆಲಮಟ್ಟವೂ ಇವೆ. ಈ ಪ್ಲಿಸ್ಟೊಸೀನ್ ಶಿಲಾಪದರಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು. ತಳಗಿನಿಂದ ಮೊದಲನೆಯ ಪದರ ಮತ್ತು ಎರಡನೆಯ ಪದರದ ಕೆಳಭಾಗವನ್ನು ಒಂದು ಗುಂಪಾಗಿಯೂ ಎರಡನೆಯ ಪದರದ ಮೇಲ್ಭಾಗ, ಮೂರನೆಯ ಮತ್ತು ನಾಲ್ಕನೆಯ ಪದರಗಳನ್ನು ಮತ್ತೊಂದು ಗುಂಪಾಗಿಯೂ ಇತ್ತೀಚಿನ ಸಂಶೋಧನೆಗಳಿಂದ ನಿರ್ದೇಶಿಸಲಾಗಿದೆ. ಭೂವಿಜ್ಞಾನ ರೀತ್ಯ ಮೊದಲ ಮತ್ತು ಎರಡನೆಯ ಪದರಗಳ ಕೆಳಭಾಗದಲ್ಲಿ ಇಲ್ಲ. ಫ್ರಾಂಚಿಯನ್ ಯುಗಕ್ಕೆ ಸೇರಿದ ಪ್ರಾಣಿಗಳ ಅವಶೇಷಗಳ ಮೊದಲ ನೆಲೆಗಳಲ್ಲಿ ಸಣ್ಣ ಆಕಾರದ ಸಸ್ತನಿಗಳು, ಪಕ್ಷಿಗಳು ಮತ್ತು ಸರೀಸೃಪಗಳು ಅನಂತರದ ಕಾಲಕ್ಕೆ ಸೇರಿದ ವಿಶಾಲವಾದ ನೆಲೆಗಳಲ್ಲಿ ಬೃಹದಾಕಾರದ ಸಸ್ತನಿಗಳಾದ ಆನೆ, ಹಂದಿ, ಜಿಂಕೆ ಮತ್ತು ಮಾಂಸಭಕ್ಷಕ ಪ್ರಾಣಿಗಳ ಪಳೆಯುಳಿಕೆಗಳೂ ಈ ಗುಂಪಿನ ಪದರಗಳ ಅಂತ್ಯಕಾಲದ ನೆಲೆಗಳಲ್ಲಿ ಉಷ್ಣಹವೆಯಲ್ಲಿ ವಾಸಿಸುವ ಗಜೆ಼ಲ್ (ಆಡಿನ ಜಾತಿಗೆ ಸೇರಿದ ಒಂದು ಪ್ರಾಣಿ) ಜಿಂಕೆ ಮತ್ತು ಕುದುರೆಗಳ ಪಳೆಯುಳಿಕೆಗಳೂ ಕಂಡುಬಂದಿವೆ. ಎರಡನೆಯ ಗುಂಪಿನ ಪದರಗಳಲ್ಲಿ ಬೇರೆ ರೀತಿಯ ಪ್ರಾಣಿಗಳ ಅವಶೇಷಗಳು ಗೋಚರವಾಗಿವೆ. ಜೌಗು ಹವೆಯಿದ್ದ ಎರಡನೆಯ ಪದರದ ಮೇಲ್ಮಟ್ಟದಲ್ಲಿ ಹಿಪೊಪೊಟಮಸ್, ಹಂದಿ, ದೈತ್ಯಾಕಾರದ ಕುರಿ, ಕುದುರೆ, ಮಾಂಸಾಹಾರಿ ಪ್ರಾಣಿಗಳು, ಡೈನಾಸರಸ್ ಮತ್ತು ಕಪಿಮಾನವವರ್ಗದ ಸಸ್ತನಿಗಳ ಅವಶೇಷಗಳು ಪ್ರಧಾನವಾಗಿವೆ. 

ಈ ವಿವಿಧ ಪದರಗಳ ಹವಾಗುಣವನ್ನು ವಿದ್ವಾಂಸರು ಈ ರೀತಿಯಾಗಿ ನಿರ್ಧರಿಸಿದ್ದಾರೆ. ಮೊದಲು ಮತ್ತು ಎರಡನೆಯ ಪದರದ ಕೆಳಭಾಗಗಳನ್ನು ಹೆಚ್ಚು ಮಳೆ ಸುರಿಯುತ್ತಿದ್ದ, ತೇವ ಹವೆಯಿದ್ದ ಆಫ್ರಿಕದ ಎರಡನೆಯ ಪ್ಲುವಿಯಲ್ ಯುಗಕ್ಕೂ ಎರಡನೆಯ ಪದರದ ಮೇಲ್ಮಟ್ಟವನ್ನು ಒಣಹವೆಯಿದ್ದ ಎರಡನೆಯ ಪ್ಲುವಿಯಲ್ ಯುಗದ ಅಂತ್ಯಕಾಲಕ್ಕೂ (ಈ ಕಾಲದಲ್ಲಿ ಅಲ್ಲಿದ್ದ ಸರೋವರದಲ್ಲಿ ಅಡಿಗಡಿಗೆ ಪ್ರವಾಹಗಳೇರ್ಪಡುತ್ತಿದ್ದು ಆ ಪ್ರವಾಹಗಳಿಂದ ಉಂಟಾದ ಪದರಗಳನ್ನು ಇಲ್ಲಿ ಕಾಣಬಹುದು) ಮೂರನೆಯ ಪದರವನ್ನು ಉಷ್ಣಹವೆಯ ಎರಡನೆಯ ಅಂತರ ಪ್ಲುವಿಯಲ್ ಯುಗಕ್ಕೂ ನಾಲ್ಕನೆಯ ಪದರವನ್ನು ಪುನಃ ಆ ಸರೋವರ ಪ್ರಬಲಿಸಿದ ತೇವ ಹವೆಯ ಮೂರನೆಯ ಪ್ಲುವಿಯಲ್ ಯುಗಕ್ಕೂ ನಿರ್ದೇಶಿಸಲಾಗಿದೆ.
ಪೊಟ್ಯಾಸಿಯಂ ಆರ್ಗಾನ್ ಕಾಲಗಣನಾಪದ್ಧತಿಯ ರೀತ್ಯ ಮೊದಲ ಪದರ ಸು.2 ದಶಲಕ್ಷ ವರ್ಷಗಳಷ್ಟೂ ಎರಡನೆಯ ಪದರದ ಮೇಲ್ಭಾಗ ಸು. 5 ಲಕ್ಷ ವರ್ಷಗಳಷ್ಟೂ ಪುರಾತನವೆಂದು ತಿಳಿದುಬಂದಿದೆ. ನಾಲ್ಕನೆಯ ಪದರದ ಮೇಲ್ಭಾಗ ಮಧ್ಯ ಪ್ಲಿಸ್ಟೊಸೀನ್ ಯುಗದ ಅಂತ್ಯ ಅಥವಾ ಅಂತ್ಯ ಪ್ಲಿಸ್ಟೊಸೀನ್ ಯುಗದ ಆರಂಭ ಕಾಲಕ್ಕೆ ಸೇರುತ್ತದೆ.

 ಮಾನವ ಜಾತಿಯ ಉಗಮ 
ಇಲ್ಲಿ ಆದಿ ಮಾನವನ ಉಗಮ ಮತ್ತು ವಿಕಾಸದ ಅಭ್ಯಾಸಕ್ಕೆ ಬಹಳ ಮುಖ್ಯವಾದ ಪುರಾವೆಗಳು ದೊರಕಿದ್ದು, ಪುರ್ವಆಫ್ರಿಕ ಮಾನವ ಜನಾಂಗದ ಉಗಮಸ್ಥಾನವೆಂದು ತೋರಿಸಿಕೊಟ್ಟಿವೆ. ಇವುಗಳಲ್ಲಿ ಬಹಳ ಮುಖ್ಯವಾದುದು ಪ್ರ.ಶ. 1959ರಲ್ಲಿ ಮೊದಲ ಪದರದ ಮೇಲ್ಮಟ್ಟದಲ್ಲಿ ದೊರಕಿದ ಜಿûಂeóÁಥ್ರೊಪಸ್ ಕಪಿಮಾನವ ಅವಶೇಷಗಳು., 17,50,000 ವರ್ಷಗಳಷ್ಟು ಹಳೆಯದಾದ ಈ ಮಾನವಾಶೇಷಗಳು ಈವರೆಗೂ ಬೆಳಕಿಗೆ ಬಂದ ಮಾನವಸಂತತಿಯಲ್ಲಿ ಮೊದಲಿನವೆಂದು ಅಭಿಪ್ರಾಯಪಡಲಾಯಿತು. ಅದೇ ಸುಮಾರಿಗೆ ಸೇರಿದ ಇನ್ನೊಂದು ಗುಂಪಿನ ಮಾನವನ ಹೋಮೋ ಹ್ಯಾಬಿಲಿಸ್ ಅವಶೇಷಗಳೊಂದಿಗೆ ಮೊತ್ತಮೊದಲಿನ ಮಾನವನಿರ್ಮಿತ ಆಯುಧೋಪಕರಣಗಳೂ ಕೆಲವು ಜಲಚರಗಳ ಅವಶೇಷಗಳೂ ಈ ನೆಲೆಯಲ್ಲಿ ಕಂಡುಬಂದುವು. ಇಲ್ಲಿ ಕಂಡುಬಂದಿರುವ ಕಲ್ಲಿನ ಅರ್ಥವರ್ತುಲದ ಅವಶೇಷಗಳು ಆ ಮಾನವರ ವಸತಿಗಳ ಅವಶೇಷಗಳಿದ್ದಿರಬಹುದೆಂದು ಅಭಿಪ್ರಾಯಪಡಲಾಗಿದೆ. ಎರಡನೆಯ ಪದರದ ಕೆಳಮಟ್ಟದಲ್ಲಿ ಹೋಮೋ ಹ್ಯಾಬಿಲಿಸ್ ಮತ್ತು ಮೇಲ್ಮಟ್ಟದಲ್ಲಿ ಹೋಮೋ ಎರಕ್ಟಸ್ ಮಾನವಾಶೇಷಗಳೂ ಆಯುಧೋಪಕರಣಗಳೂ ದೊರಕಿವೆ.

 ಸಾಂಸ್ಕೃತಿಕ ಅವಶೇಷಗಳು 
ಇಲ್ಲಿ ಕಂಡುಬಂದಿರುವ ಮಾನವ ನಿರ್ಮಿತ ಅವಶೇಷಗಳನ್ನು ಎರಡು ಸಾಂಸ್ಕೃತಿಕ ವಿಧಾನಗಳಿಗೆ ನಿರ್ದೇಶಿಸಲಾಗಿದೆ. ಮೊದಲ ಪದರ ಮತ್ತು ಎರಡನೆಯ ಪದರದ ಕೆಳಮಟ್ಟದಲ್ಲಿ, ಖಚಿತವಾಗಿ ಮಾನವ ನಿರ್ಮಿತವೆಂದು ಪರಿಗಣಿಸಲ್ಪಟ್ಟಿರುವ ಉಂಡೆಕಲ್ಲಿನಾಯುಧ, ತುಂಡುಕೊಡಲಿಗಳು ಹೇರಳವಾಗಿದ್ದು ಅದನ್ನು ಓಲ್ಡೋವನ್ ಸಂಸ್ಕೃತಿಯೆಂದು ಕರೆಯಲಾಗಿದೆ. ಎರಡೂ ಪಾಶರ್ವ್‌ಗಳಿಂದ ಚಕ್ಕೆಗಳನ್ನು ತೆಗೆದುದರಿಂದ ಉಂಟಾದ ಚೂಪಾದ ಆಯುಧಗಳ ಅಂಚಿನ ಮೇಲೆ ಉಪಯೋಗದಿಂದುಂಟಾದ ಚಿಹ್ನೆಗಳು ಕಂಡುಬರುತ್ತವೆ. ಈ ಆಯುಧಗಳ ತಯಾರಿಕೆಯಲ್ಲಿ ಬಂದ ಚಕ್ಕೆಕಲ್ಲುಗಳನ್ನು ಕೊಯ್ಯುವ ಮತ್ತು ಒರೆಯುವ ಸಾಧನಗಳನ್ನಾಗಿ ಉಪಯೋಗಿಸಿಕೊಂಡ ಮಾಹಿತಿಗಳು ಕಂಡುಬಂದಿವೆ. ಕ್ರಮೇಣ ಈ ಉಂಡೆಕಲ್ಲಿನಾಯುಧಗಳು ರೂಪಾಂತರ ಹೊಂದಿ, ಎರಡು ಪಾಶರ್ವ್‌ಗಳಿಂದ ಚಕ್ಕೆಗಳನ್ನು ತೆಗೆದಿರುವ ಮೊನೆಯಾದ ತುದಿಯಿರುವ ಮತ್ತು ದಪ್ಪನಾದ ಕೈಪಿಡಿಯಿರುವ, ಕೈಗೊಡಲಿಯ ಪುರ್ವರೂಪದ ಆಯುಧಗಳು ತಲೆದೋರಿವೆ. ಈ ಸಂಸ್ಕೃತಿಯನ್ನು ಕೈಕೊಡಲಿ ಸಂಸ್ಕೃತಿಯೆಂದು ಕರೆಯಲಾಗಿದೆ. ಎರಡನೆಯ ಪದರದ ಮೇಲ್ಮಟ್ಟದಲ್ಲಿ ಉಂಡೆಕಲ್ಲಿನ ತುಂಡುಕೊಡಲಿಗಳು ಉಳಿದುಬಂದಿದ್ದರೂ ಅಬ್ಬೆವಿಲ್ಲಿಯನ್ ಹಂತದ ಕೈಗೊಡಲಿಗಳು ಪ್ರಧಾನವಾಗಿವೆ. ಈ ಹಂತದಲ್ಲಿ ಕೆಲವು ಅಷ್ಯೂಲಿಯನ್ ಹಂತಕ್ಕೆ ಸೇರಿದ ಆಯುಧಗಳು ದೊರಕಿದ್ದರೂ ಅವು ಮೇಲಿನಿಂದ ಅಂತಸ್ಸರಿತವಾಗಿರಬಹುದೆಂದು ಅಭಿಪ್ರಾಯಪಡಲಾಗಿದೆ. ಈ ಪದರದ ಅಂತ್ಯಕಾಲದ ಅಷ್ಯೂಲಿಯನ್ ರೀತಿಯ ಆಯುಧಗಳು ಮೊದಲ ಬಾರಿಗೆ ಬಳಕೆಗೆ ಬಂದುವು. ಮೂರನೆಯ ಪದರದಲ್ಲಿ ಅಬ್ಬೆವಿಲ್ಲಿಯನ್ ಅಷ್ಯೂಲಿಯನ್ ಆಯುಧೋಪಕರಣಗಳು ದೊರಕಿದ್ದರೂ ಅಷ್ಯೂಲಿಯನ್ ಸಂಸ್ಕೃತಿ ಪ್ರಧಾನವಾಗುತ್ತದೆ. ನಾಲ್ಕನೆಯ ಪದರದಲ್ಲಿ ಅಷ್ಯೂಲಿಯನ್ ಕೈಗಾರಿಕೆಯ ಆರು ಬೇರೆ ಬೇರೆ ಹಂತಗಳಿಗೆ ನಿರ್ದೇಶಿತವಾಗುವ ಆಯುಧಗಳು ದೊರಕುತ್ತವೆ. ಕ್ಲೀವರ್ ರೀತಿಯ ಆಯುಧಗಳು ಎರಡನೆಯ ಪದರದಲ್ಲಿ ಮೊದಲ ಬಾರಿಗೆ ದೊರೆತರೂ ಈ ಕಾಲದಲ್ಲಿ ಅವನ್ನು ಹೆಚ್ಚು ಸಂಖ್ಯೆಯಲ್ಲಿ ಮತ್ತು ವಿವಿಧಾಕೃತಿಗಳಲ್ಲಿ ಮಾಡಿದುದಕ್ಕೆ ಸೂಚನೆಗಳಿವೆ. ಮೊನೆಯಾದ ತುದಿಯುಳ್ಳ ಅಂಡಾಕಾರದ ಮತ್ತು ಭಲ್ಲೆಯಾಕಾರದ ಕೈಗೊಡಲಿಗಳು ಈ ಕೈಗಾರಿಕೆಯ ವೈವಿಧ್ಯವನ್ನು ತೋರುತ್ತವೆ. ಈ ಪದರದ ಅಂತ್ಯಕಾಲದಲ್ಲಿ ಕೈಗೊಡಲಿ ಸಂಸ್ಕೃತಿ ಉಚ್ಛ್ರಾಯ ಸ್ಥಿತಿಯಲ್ಲಿದ್ದುದನ್ನು ನಯವಾಗಿ ಕಂಡರಿಸಿದ ಅನೇಕ ಉತ್ತಮ ಆಯುಧಗಳು ತೋರುತ್ತವೆ.	(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ